

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವೃದ್ಧರಲ್ಲದವರಿಗೂ ವೃದ್ಧಾಪ್ಯ ವೇತನ ಕೊಡಿಸುವ ಕಳ್ಳಾಟ ನಡೆಸಿದ್ದ ‘ಚತುರ’ ಈಗ ಸಿಕ್ಕಿಬಿದ್ದಿದ್ದಾನೆ.
ಚತುರ್(45) ಬಂಧಿತ. ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಕಾರ್ಯಾಚರಿಸಿ ಈತನ ಕೃತ್ಯಗಳನ್ನು ಬಯಲಿಗೆಳೆದಿದ್ದಾರೆ.
ಆರೋಪಿ ಯಾರೇ ಹಣ ಕೊಟ್ಟರೂ ಅವರ ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕವನ್ನೇ ತಿದ್ದಿ ಅವರಿಗೆ ವೃದ್ಧಾಪ್ಯ ವೇತನ ಕೊಡಿಸುವ ಕೆಲಸ ಮಾಡುತ್ತಿದ್ದ. ನಗರದಲ್ಲಿ ಮೂರು ಪ್ರತ್ಯೇಕ ಸ್ಟಾಲ್ ಗಳನ್ನು ತೆರದಿರುವ ಈತ ಇಲ್ಲಿಂದ ಸರಕಾರಿ ಯೋಜನೆಗಳ ಸೌಲಭ್ಯ ಕೊಡಿಸುವ ಮಧ್ಯವರ್ತಿ ಕೆಲಸ ಮಾಡಿಕೊಂಡಿದ್ದ.
ಸರಕಾರದ ನಿಯಮದಂತೆ 60 ಅಥವಾ ಮೇಲ್ಪಟ್ಟವರಿಗೆ ವೃದ್ಧಾಪ್ಯ ವೇತನ ನೀಡಲಾಗುತ್ತದೆ. ಆದರೆ ಚತುರ್ ಕೆಲ ನಿರ್ದಿಷ್ಟ ಸಾಫ್ಟ್ ವೇರ್ ಗಳ ದುರುಪಯೋಗ ಪಡೆದು ಇ- ಆಧಾರ್ ಕಾರ್ಡ್ ಪಡೆದು ಅಲ್ಲಿಂದ 40 50 ವರ್ಷದವರಿಗೂ ವೃದ್ಧಾಪ್ಯ ವೇತನ ಕೊಡಿಸುತ್ತಿದ್ದ.

ಈತನ ರಾಜಾಜಿನಗರ ಹಾಗೂ ಕೆಂಗೇರಿಯ ಸ್ಟಾಲ್ ಗಳ ಮೇಲೆ ದಾಳಿ ಮಾಡಿರುವ ಸಿಸಿಬಿ ತಂಡ 6 ಕಂಪ್ಯೂಟರ್ ಗಳು, 1 ಲ್ಯಾಪ್ ಟಾಪ್, 4 ಮೊಬೈಲ್ ಗಳು, 205 ವೃದ್ಧಾಪ್ಯ ವೇತನ ಮಂಜೂರಾತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಇದರ ಹಿಂದೆ ನಿರ್ದಿಷ್ಟ ಜಾಲವೇ ಇದ್ದು, ಈತನ ಇನ್ನಷ್ಟು ಸಹವರ್ತಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಅಷ್ಟೇ ಅಲ್ಲದೆ ಆರೋಪಿಯನ್ನು ಬಳಸಿಕೊಂಡು ನಕಲಿ ದಾಖಲೆಗಳ ಮೂಲಕ ವೃದ್ಧಾಪ್ಯ ವೇತನ ಪಡೆಯುತ್ತಿದ್ದವರ ಕೊರಳಿಗೂ ತನಿಖೆಯ ಉರುಳು ಬಿದ್ದಿದೆ.